71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ 71 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ. ಬಿ.ಸರೋಜಾದೇವಿ, ಡಾ.ವಿಷ್ಣುವರ್ಧನ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು, ನ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 30: 71ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ 71 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ. ಸಮಾಜಸೇವೆ 9, ಜಾನಪದ, ಸಂಕೀರ್ಣ ಕ್ಷೇತ್ರದಲ್ಲಿ ತಲಾ 7, ರಂಗಭೂಮಿ, ಸಾಹಿತ್ಯ ಕ್ಷೇತ್ದಲ್ಲಿ ತಲಾ 6, ಶಿಕ್ಷಣ 4, ಸಂಗೀತ, ಚಲನಚಿತ್ರ/ಕಿರುತೆರೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಲಾ 3, ಶಿಲ್ಪಕಲೆ, ಕೃಷಿ, ವಿಜ್ಞಾನ/ತಂತ್ರಜ್ಞಾನ, ಮಾಧ್ಯಮ,ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ 2, ನೃತ್ಯ, ಯಕ್ಷಗಾನ, ಬಯಲಾಟ, ಕರಕುಶಲ, ಪರಿಸರ, ಮಾಧ್ಯಮ/ಛಾಯಾಚಿತ್ರ, ಸಂಕೀರ್ಣ ವಾಸ್ತುಶಾಸ್ತ್ರ, ಎಂಜಿನಿಯರಿಂಗ್, ನ್ಯಾಯಾಂಗ, ಹೊರನಾಡು/ಹೊರದೇಶ ಮತ್ತು ಚಿತ್ರಕಲೆ ಕ್ಕ್ಷತ್ರಗಳಲ್ಲಿ ತಲಾ 1 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸರೋಜಾದೇವಿ, ಡಾ.ವಿಷ್ಣುವರ್ಧನ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ
ಬಿ.ಸರೋಜಾದೇವಿ, ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು, ನ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಆಹ್ವಾನಿಸಲು ಪ್ರಯತ್ನಿಸುತ್ತಿದ್ದೇವೆ. ವಿಷ್ಣುವರ್ಧನ್ ಜೊತೆ ನಟಿಸಿದವರನ್ನು ಕಾರ್ಯಕ್ರಮಕ್ಕೆ ಕರೆಸುತ್ತೇವೆ. ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಇನ್ನೂ ಬಹಳಷ್ಟು ಜನರಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಪರಿಗಣನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

