Public News 18
Breaking News Breaking-News Headlines Top Stories

ಫುಟ್​​ಪಾತ್​​ ಮೇಲೆ ವಾಹನ ಚಾಲನೆ: ಪ್ರಸ್ತುತ ಇರುವ 500 ರೂ. ದಂಡ 5,000ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ಫುಟ್‌ಪಾತ್‌ಗಳ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ರಾಜ್ಯ ಸರ್ಕಾರ, ದಂಡದ ಪ್ರಮಾಣವನ್ನು 500 ರಿಂದ 5,000ಕ್ಕೆ ಹೆಚ್ಚಿಸಲು ಮುಂದಾಗಿದೆ. ಇತರ ಸಂಚಾರ ನಿಯಮ ಉಲ್ಲಂಘನೆಗಳಿಗೂ ದಂಡ ಹೆಚ್ಚಿಸುವ ಕುರಿತೂ ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

ಬೆಂಗಳೂರು, ಅಕ್ಟೋಬರ್​​ 30: ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಫುಟ್‌ಪಾತ್‌ಗಳ ಮೇಲೆ ಕಾರು ಅಥವಾ ದ್ವಿಚಕ್ರ ವಾಹನ ಚಲಾಯಿಸುವ ಸವಾರರಿಗೆ ಭಾರಿ ದಂಡ ವಿಧಿಸುವ ಚಿಂತನೆ ನಡೆದಿದೆ. ಪ್ರಸ್ತುತ ಇರುವ 500 ರೂ. ದಂಡವನ್ನು 5,000 ರೂ.ಗೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಪ್ರಸ್ತಾವಿತ ನಿಯಮಗಳ ಪ್ರಕಾರ, ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5,000 ರೂ. ಹಾಗೂ ಎರಡನೇ ಬಾರಿ ಉಲ್ಲಂಘಿಸಿದರೆ 10,000 ರೂ. ದಂಡ ಬೀಳಲಿದೆ ಎನ್ನಲಾಗಿದೆ.

ಈ ಕುರಿತು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಿದೆ. ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಿಕೊಳ್ಳಲು ವಾಹನ ಸವಾರರು ಪಾದಚಾರಿ ಮಾರ್ಗಗಳನ್ನು ಬಳಸುವುದನ್ನು ತಡೆಯುವುದು ಈ ದಂಡ ಹೆಚ್ಚಳದ ಪ್ರಮುಖ ಉದ್ದೇಶವಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಬಳಿಕ ಬೆಂಗಳೂರಿನ ಹಲವು ಫುಟ್‌ಪಾತ್‌ಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಈ ತೆರವುಗೊಳಿಸಿದ ಫುಟ್‌ಪಾತ್‌ಗಳನ್ನೇ ಬಳಸಲು ಆರಂಭಿಸಿರುವ ಹಿನ್ನೆಲೆ ಇಂತವರ ನಿಯಂತ್ರಣಕ್ಕೆ ಸರ್ಕಾರ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಇತರ ಸಂಚಾರ ನಿಯಮ ಉಲ್ಲಂಘನೆಗಳಿಗೂ ದಂಡ ಹೆಚ್ಚಳ ಸಾಧ್ಯತೆ

ಫುಟ್‌ಪಾತ್‌ಗಳ ಮೇಲೆ ವಾಹನ ಚಲಾಯಿಸುವುದಷ್ಟೇ ಅಲ್ಲದೆ, ಇತರ ಸಂಚಾರ ನಿಯಮ ಉಲ್ಲಂಘನೆಗಳಿಗೂ ದಂಡ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ. ಫುಟ್‌ಪಾತ್‌ಗಳ ಮೇಲೆ ವಾಹನ ನಿಲುಗಡೆ ಮಾಡುವುದು, ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವುದು, ನೋ ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸುವುದು ಹಾಗೂ ಸಿಗ್ನಲ್ ಉಲ್ಲಂಘನೆಗಳು ಈ ಪಟ್ಟಿಯಲ್ಲಿವೆ.

Share

Related posts

Leave a Comment