ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಹಮ್ಮಿಕೊಂಡಿದ್ದ ಕರಾಳ ದಿನದ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಎಂಇಎಸ್ ಪುಂಡಾಟಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸಿಎಂ ಡಿ.ಕೆ. ಶಿವಕುಮಾರ್ ಕಾನೂನು ಕೈಗೆತ್ತಿಕೊಳ್ಳದಂತೆ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ, ನವೆಂಬರ್ 01: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಡೆಸಲು ಯತ್ನಿಸಿದ ಕರಾಳ ದಿನ ಆಚರಣೆ ಮತ್ತು ಪುಂಡಾಟಿಕೆ ಗಡಿಭಾಗದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ರ‍್ಯಾಲಿ ನಡೆಸಲು ಯತ್ನಿಸಿದ ಎಂಇಎಸ್ ಕಾರ್ಯಕರ್ತರ ವಿರುದ್ಧ ಕರವೇ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಕರವೇ ಕಾರ್ಯಕರ್ತರು ವಶಕ್ಕೆ
ಬೆಳಗಾವಿಯ ಗೋಗಟೆ ಸರ್ಕಲ್ ಬಳಿ ಜಿಲ್ಲಾಡಳಿತದ ಅನುಮತಿ ಇಲ್ಲದೇ ಕರಾಳ ದಿನದ ರ‍್ಯಾಲಿ ನಡೆಸಲು ಮುಂದಾದ ಎಂಇಎಸ್ ಪುಂಡರ ಕಡೆಗೆ ನುಗ್ಗಲು ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಕರವೇ ಮುಖಂಡ ವಾಜೀದ್ ಸೇರಿದಂತೆ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಘಟನೆ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, “ಎಂಇಎಸ್ ಸಂಘಟನೆಯನ್ನು ಯಾವುದೇ ಔಷಧಿ ಇಲ್ಲದೇ ವಾಸಿ ಮಾಡೋಣ” ಎಂದು ವ್ಯಂಗ್ಯವಾಡಿದ್ದಾರೆ. “ಈ ಹಿಂದೆ ಕರಾಳ ದಿನದಲ್ಲಿ 15 ರಿಂದ 20 ಸಾವಿರ ಜನರು ಸೇರುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ನೂರಾರಕ್ಕೆ ಕುಸಿದಿದೆ. ಅವರ ಪ್ರಭಾವ ಸಂಪೂರ್ಣವಾಗಿ ಕ್ಷೀಣಿಸುತ್ತಿದೆ” ಎಂದು ಅವರು ಹೇಳಿದರು.

