ವೈದ್ಯರ ಎಡವಟ್ಟಿನಿಂದ 1.5 ವರ್ಷದ ಮಗುವಿನ ಪರಿಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿರುವ ಘಟನೆ ಬೆಂಗಳೂರಿನಲ್ಲಿ ಕ್ಲೌಡ್ ನೈನ್ ಆಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿ 3 ತಿಂಗಳಾದರೂ ಚೇತರಿಕೆ ಕಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಲಾಗಿದೆ.

ಬೆಂಗಳೂರು, ಅಕ್ಟೋಬರ್ 30: ನಗರದ ನಾಗರಭಾವಿಯ ಕ್ಲೌಡ್ ನೈನ್ ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. 1.5 ವರ್ಷದ ಮಗುವಿನ ಕಿವಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಗಂಭೀರ ಎಡವಟ್ಟು ಉಂಟಾಗಿರುವ ಘಟನೆ ನಡೆದಿದೆ. ಸದ್ಯ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲರಿಂಗೋಸ್ಪಸಂ ಉಂಟಾಗಿ ಮಗುವಿನ ಆಮ್ಲಜನಕ ಮಟ್ಟ ಕುಸಿತವಾಗಿದೆ. ಬಳಿಕ ಮಗುವಿಗೆ ಸುಮಾರು 7 ನಿಮಿಷಗಳ ಕಾಲ ಹೃದಯ ಸ್ತಂಭನ ಉಂಟಾಗಿದ್ದು, ಸಿಪಿಆರ್ ಮೂಲಕ ಪುನಶ್ಚೇತನ ನೀಡಲಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಮಗುವಿಗೆ ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದಲ್ಲಿರವ ಕ್ಲೌಡ್ ನೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ನಾಗರಬಾವಿ ಕ್ಲೌಡ್ 9 ಆಸ್ಪತ್ರೆ ವಿರುದ್ಧ ಪೋಷಕರು ಆಕ್ರೋಶ
ಶಯನ್ ತಾಯಿ ಮೋನಿಕಾ ಪ್ರತಿಕ್ರಿಯಿಸಿದ್ದು, ‘ಮಗುವಿಗೆ ಚಿಕಿತ್ಸೆ ನಡೆದು 3 ತಿಂಗಳಾದರೂ ಚೇತರಿಕೆ ಕಂಡಿಲ್ಲ. ಈಗಲೂ ಕೂಡ ಮಗು ತುರ್ತು ನಿಗಾ ಘಟಕದಲ್ಲೇ ಇದೆ. ಮಗು ಮತ್ತೆ ಹುಷಾರಾಗಿ ನಮಗೆ ಸಿಗುತ್ತೆ ಅನ್ನೋ ವಿಶ್ವಾಸ ಕ್ಷೀಣಿಸುತ್ತಿದೆ. ಕೇವಲ ಕಿವಿಗೆ ಆದ ಗಾಯದಿಂದ ಹೀಗೆ ಮಗು ಆಗೋಕೆ ಹೇಗೆ ಸಾಧ್ಯ? ಮಗುವಿನ ಚಿಕಿತ್ಸೆಗೆ ಈವರೆಗೂ 3.5 ಲಕ್ಷ ರೂ ಖರ್ಚು ಮಾಡಿದ್ದೇವೆ. ಸದ್ಯ ಮಗು ಜಯನಗರ ಕ್ಲೌಡ್ 9 ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಕೈ ಶಾಸಕನ ಎಡವಟ್ಟು: ಆಸ್ಪತ್ರೆಯಲ್ಲಿಯೇ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
‘ನಾವು ಸಾಮಾನ್ಯ ಅನಸ್ತೇಶಿಯಾ ಕೊಡಿ ಅಂತ ಹೇಳಿದ್ದೆವು. ಆದರೂ ಕೇಳದೆ ತೀವ್ರ ಅನಸ್ತೇಶಿಯಾ ಕೊಟ್ಟಿದ್ದಾರೆ. ಮಗು ಕುಡಿದ ಹಾಲು ಶ್ವಾಸಕೋಶಕ್ಕೆ ಹೋಗಿ, ಹೃದಯ ಸ್ತಂಭನ ಆಗಿದೆ ಅಂತ ಹೇಳುತ್ತಿದ್ದಾರೆ. ಬಳಿಕ ಅದರಿಂದ ಮೆದುಳಿಗೆ ಸಮಸ್ಯೆ ಆಗಿ ಈ ರೀತಿ ಮಗು ಚಿಂತಾಜನಕ ಸ್ಥಿತಿ ತಲುಪಿದೆ. ಮಗುವಿನ ಚಿಕಿತ್ಸೆಯಲ್ಲಿ ಭಾರೀ ಲೋಪ ಆಗಿದೆ ಅಂತ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ’ ಎಂದು ಅವರು ಹೇಳಿದರು.

