Public News 18
Breaking News Breaking-News Government Updates Headlines India Live News Sports Trending

ದೀಪಾವಳಿ ಹಬ್ಬಕ್ಕೆ ಹೊಸ ರೂಲ್ಸ್; ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ!

ದೀಪಾವಳಿ ಹಬ್ಬಕ್ಕೆ ಕರ್ನಾಟಕ ಸರ್ಕಾರ ಹೊಸ ಮಾರ್ಗದರ್ಶಿ ಬಿಡುಗಡೆ ಮಾಡಿದೆ. ನವೆಂಬರ್ 8 ರಿಂದ 10 ರವರೆಗೆ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಕ್ಯೂಆರ್ ಕೋಡ್ ಇಲ್ಲದ ಪಟಾಕಿ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಬೆಂಗಳೂರು, ಅಕ್ಟೋಬರ್ 31: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ವಯ, ರಾಜ್ಯದಲ್ಲಿ ನವೆಂಬರ್ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.

ಆಸ್ಪತ್ರೆಗಳು, ಶಾಲೆಗಳ ಸುತ್ತಮುತ್ತ ಪಟಾಕಿ ನಿಷೇಧ

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಉನ್ನತ ಮಟ್ಟದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿಗದಿತ ಸಮಯದ ಹೊರತಾಗಿ ಪಟಾಕಿ ಹೊಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ವಿಶೇಷವಾಗಿ ಆಸ್ಪತ್ರೆಗಳು, ಶಾಲೆಗಳು ಹಾಗೂ ಪ್ರಮುಖ ಶ್ರದ್ಧಾ ಕೇಂದ್ರಗಳ ಸುತ್ತಮುತ್ತ ಪಟಾಕಿ ನಿಷೇಧ ಪ್ರದೇಶಗಳನ್ನು ಕಾಯ್ದುಕೊಳ್ಳಲು ತಿಳಿಸಲಾಗಿದೆ


ಹಸಿರು ಪಟಾಕಿಗಳ ಮಾರಾಟಕ್ಕೆ ಅನುಮತಿ

ಪ್ರಮುಖ ಅಂಶವೆಂದರೆ, ರಾಜ್ಯದಲ್ಲಿ ಕೇವಲ ಹಸಿರು ಪಟಾಕಿಗಳನ್ನು (Green Crackers) ಮಾತ್ರ ಮಾರಾಟ ಮಾಡಲು ಮತ್ತು ಬಳಸಲು ಅನುಮತಿ ನೀಡಲಾಗಿದೆ. ಗ್ರೀನ್ ಕ್ರಾಕರ್ಸ್ ಬಾಕ್ಸ್‌ಗಳ ಮೇಲೆ ಕಡ್ಡಾಯವಾಗಿ ಕ್ಯೂಆರ್ ಕೋಡ್ (QR Code) ಇರಬೇಕು. ಈ ಚಿಹ್ನೆ ಇಲ್ಲದ ಪಟಾಕಿಗಳನ್ನು ಮಾರಾಟ ಮಾಡಿದರೆ ಅಥವಾ ಅಕ್ರಮವಾಗಿ ಸಾಗಿಸಿದರೆ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೆ, ಸಂಬಂಧಪಟ್ಟವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದು, ಹೆಚ್ಚು ದೀಪಗಳನ್ನು ಬೆಳಗಿ, ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ವೃದ್ಧರು, ಮಕ್ಕಳು ಹಾಗೂ ಮೂಕ ಪ್ರಾಣಿಗಳ ಆರೋಗ್ಯವನ್ನು ಕಾಪಾಡಲು ಸಹಕರಿಸುವಂತೆ ಸರ್ಕಾರ ಕೋರಿದೆ.

Share

Related posts

Leave a Comment