
ಬಣ್ಣದ ಲೋಕದಲ್ಲಿ ನಟಿಸುವ ಕಲಾವಿದರ ಬದುಕು ಹೊರಗಿನಿಂದ ನೋಡಲು ತುಂಬಾ ಸುಂದರವಾಗಿ, ಸದಾ ಹಸನ್ಮುಖಿಯಾಗಿ ಕಾಣಿಸುತ್ತದೆ. ಆದರೆ ಆ ಬಣ್ಣದ ಮುಖವಾಡದ ಹಿಂದೆ ಎಂತಹ ನೋವಿನ ಕಥೆಗಳಿರುತ್ತವೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ವೃತ್ತಿ ಬದ್ಧತೆ ಎಂದರೆ ಏನು? ನಟನೆಯ ಮೇಲಿನ ಪ್ರೀತಿ ಎಂದರೆ ಎಂತಹುದು? ಎಂಬುದಕ್ಕೆ ತಮಿಳು ಚಿತ್ರರಂಗದ ದಂತಕಥೆ ಮನೋರಮಾ (Manorama) ಅವರು ನೀಡಿದ ಈ ಒಂದು ಉದಾಹರಣೆ ಇಂದಿಗೂ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ.
ತಮಿಳು ಚಿತ್ರರಂಗದಲ್ಲಿ ‘ಆಚಿ’ ಎಂದೇ ಮನೆಮಾತಾಗಿದ್ದ ಮನೋರಮಾ ಅವರು ಸಾಮಾನ್ಯ ನಟಿಯಲ್ಲ. ಸುಮಾರು 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆ ಬರೆದವರು. ತಮಿಳುನಾಡು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವಂತಹ ಈ ನಟಿ, ಏಳು ಮಂದಿ ಮುಖ್ಯಮಂತ್ರಿಗಳ ಜೊತೆ ತೆರೆ ಹಂಚಿಕೊಂಡ ಏಕೈಕ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಆದರೆ ಇವರ ನಟನಾ ಬದುಕಿನಲ್ಲಿ ನಡೆದ ಒಂದು ಘಟನೆ ಇಂದಿಗೂ ಸಿನಿರಂಗದ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದುಹೋಗಿದೆ.

