2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ‘40% ಕಮಿಷನ್ ರೇಟ್ ಕಾರ್ಡ್’ ಜಾಹೀರಾತು ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ಮಾನನಷ್ಟ ದೂರನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಬಗ್ಗೆ ಆದೇಶ ನೀಡಿದ್ದು, ಆದೇಶದ ವಿವರವಾದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಬೆಂಗಳೂರು, ನವೆಂಬರ್ 04: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್ ಸಂಬಂಧ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಬಗ್ಗೆ ಆದೇಶ ನೀಡಿದ್ದು, ಆದೇಶದ ವಿವರವಾದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಜುಲೈ 4ರಂದು ಇದೇ ಪ್ರಕರಣದಲ್ಲಿ ಅಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ (ಕೆಪಿಸಿಸಿ) ಇದೇ ರೀತಿ ಪರಿಹಾರ ನೀಡಲಾಗಿತ್ತು. ಇದೇ ಪ್ರಕರಣದಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೂ ಈ ವರ್ಷದ ಜನವರಿಯಲ್ಲಿ ಹೈಕೋರ್ಟ್ ತಡೆ ನೀಡಿತ್ತು.
ಪ್ರಕರಣ ಏನು?
2023ರ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ಜಾಹೀರಾತುಗಳು ಮತ್ತು ಕಾಂಗ್ರೆಸ್ ಸುಳ್ಳು ಪ್ರಚಾರ ನಡೆಸಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕ ದೂರು ದಾಖಲಿಸಿತ್ತು. 2023ರಲ್ಲಿ ವಿಚಾರಣಾ ನ್ಯಾಯಾಲಯ ಈ ದೂರನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮತ್ತು ವರ್ಗಾವಣೆಗೆ ಬಿಜೆಪಿ ನಿರ್ದಿಷ್ಟ ‘ದರ’ ಮತ್ತು ‘ಕಮಿಷನ್’ ಪಡೆಯುತ್ತಿದೆ ಎಂದು ಜಾಹೀರಾತುಗಳಲ್ಲಿ ಆರೋಪಿಸಲಾಗಿತ್ತು. ಈ ಜಾಹೀರಾತುಗಳು ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂಬುದು ಬಿಜೆಪಿ ರಾಜ್ಯ ಘಟಕದ ವಾದವಾಗಿತ್ತು. ಆರೋಪಿಗಳು ತಮ್ಮ ಕಾಲ್ಪನಿಕ ಕಲ್ಪನೆಯ ಆಧಾರದಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿತ್ತು.

